’ಮೂಢನಂಬಿಕೆ’ಯನ್ನಳಿಸುವ - TopicsExpress



          

’ಮೂಢನಂಬಿಕೆ’ಯನ್ನಳಿಸುವ ’ಮೂಢನಂಬಿಕೆ’! ಸಮಾಜದಲ್ಲಿನ ಮೂಢನಂಬಿಕೆಯನ್ನು ತೊಡೆದುಹಾಕುವ ’ಪ್ರಗತಿಪರ’ ಕಾಯ್ದೆಯೊಂದನ್ನು ರಾಜ್ಯ ಸರಕಾರ ತರಹೊರಟಿದೆ. ಅದೂ ತನ್ನದೇ ಒರಿಜಿನಾಲಿಟಿಯಿಂದಲ್ಲ, ಮಹಾರಾಷ್ಟ್ರದ ಇತ್ತೀಚಿನ ಮಸೂದೆಯ ಮಾದರಿ ಅನುಸರಿಸಿ. ಆಷಾಢ ಏಕಾದಶಿಯಂದು, ಪುಣೆ ದಕ್ಷಿಣದ ಅಳಂದ ಮತ್ತು ಬಿಹುವಿನಿಂದ ಫಂಡರಪುರದವರೆಗೆ, ವಿಠಲ ಭಕ್ತರು ನಡೆಸುವ ಊರಗಲದ ವಾರ‍್ಕರಿ ಭಜನ ಚಾರಣ ಗೋಷ್ಠಿಯನ್ನೂ ಮೂಢನಂಬಿಕೆಯೆಂದು ’ನಂಬಿ’ ಇಂತಹ ಏನೇನನ್ನೋ ನಿಯಂತ್ರಿಸುವ ಮಹದಾಸೆಯನ್ನು ಅಲ್ಲಿನ ಮಸೂದೆ ಹೊಂದಿದೆ. ಕಿತ್ತುತಿನ್ನುವ ಆರ‍್ಥಿಕ ದಾರಿದ್ರ್ಯವನ್ನೂ, ಮುಸುಕಿನೊಳಗಿನ ಗುದ್ದಾಟದ ರಾಜಕೀಯವನ್ನೂ, ನಿಜವಾದ ಸಾಮಾಜಿಕ ಅನ್ಯಾಯವನ್ನೂ ಎದುರಿಸುವ ಬುದ್ಧಿಶಕ್ತಿಯಾಗಲೀ, ನೈತಿಕಶಕ್ತಿಯಾಗಲೀ, ಪ್ರಾಮಾಣಿಕತೆಯಾಗಲೀ ಇಲ್ಲದ ರಾಜಕೀಯ ಪ್ರಭುತ್ವ, ತನ್ನ ಮೂಲಭೂತ ಜವಾಬ್ದಾರಿಯಲ್ಲದ ಕೆಲಸಗಳಿಂದ ವಿವಾದಗಳನ್ನು ಹುಟ್ಟಿಹಾಕಿ, ’ಬೀಸೋದೊಣ್ಣೆಯಿಂದ ತಪ್ಪಿಸಿಕೊಳ್ಳುವ’ ಜಾಣತನ ತೋರಿಸುವುದು, ಜಾಣರಿಗೆ ಅರ‍್ಥವಾಗುವ ಸಂಗತಿಯೇ ಆಗಿದೆ. ಆದರೇನು ಮಾಡುವುದು? ಇಂಥ ’ಜಾಣರು’ ಸ್ವಯಂ ವೋಟ್ ಬ್ಯಾಂಕ್ ಅಲ್ಲ ಮತ್ತು ವೋಟ್ ಬ್ಯಾಂಕನ್ನು ಸೃಷ್ಟಿಸುವ ಚಾಲಾಕೂ ಅವರಲ್ಲಿರುವುದಿಲ್ಲ. ಆದ್ದರಿಂದ ಅಂಥವರನ್ನು ಕೇರ್ ಮಾಡುವ ಅಗತ್ಯವುಂಟೆಂದು, ರಾಜಕೀಯ ಶಕ್ತಿಗಳಿಗನ್ನಿಸುವುದಿಲ್ಲ. ಪ್ರಾಣಿಬಲಿ, ನರಬಲಿ, ಮಡೆಸ್ನಾನ, ಪಂಕ್ತಿಭೇದ, ಬೆತ್ತಲೆಸೇವೆ, ಮಾಟ-ಮಂತ್ರ ಇತ್ಯಾದಿ ಚಟುವಟಿಕೆಗಳನ್ನು ಪೊಲೀಸ್ ಬಲ ಉಪಯೋಗಿಸಿ ಹತ್ತಿಕ್ಕುವ ಅಧಿಕಾರವನ್ನು, ಈ ಕಾಯ್ದೆ, ಸರಕಾರಕ್ಕೆ ಕೊಡುತ್ತದೆ. ಇವೆಲ್ಲಾ ಅಯೋಗ್ಯ ಸಂಪ್ರದಾಯವೆನ್ನುವುದನ್ನು ವಿದ್ಯಾವಂತರಾದವರು ಯಾರೂ ಅಲ್ಲಗಳೆಯುವುದಿಲ್ಲ. ಇವು ಯಥಾಸ್ಥಿತಿಯಾಗಿ ಮುಂದುವರೆಯಬೇಕೆಂದೂ ಬಹುಮಂದಿ ಬಯಸುವುದಿಲ್ಲ. ಆದರೆ ಸಂಪ್ರದಾಯಗಳಲ್ಲಿ ಸಮಾಜಕ್ಕೆ ಹಿತವಾದವೂ ಇರುತ್ತದೆ; ಪಟ್ಟಭದ್ರಹಿತಾಸಕ್ತಿಯವೂ ಇರುತ್ತದೆ; ನಿರಪಾಯಕಾರಿಯಾದವೂ ಇರುತ್ತದೆ. ಇವುಗಳ ವಿಂಗಡಣೆ ಮತ್ತು ಸುಧಾರಣೆ, ಚುನಾಯಿತ ಸರಕಾರವೊಂದರ ಪ್ರಾಥಮಿಕ ಆದ್ಯತೆ ಅಲ್ಲವೇ ಅಲ್ಲ. ಮಡೆಸ್ನಾನವೆನ್ನುವುದು ಒಂದು ಅಸಹ್ಯ ಪದ್ಧತಿ ನಿಜ. ಇದು ಏಕೋ ಹೇಗೊ ಹುಟ್ಟಿಕೊಂಡಿತು. ಇದು ಬುದ್ಧಿಗೇಡಿಗಳ ಸಾಂಸ್ಕೃತಿಕ ಶೋಷಣೆ. ಇದರಿಂದ ಯಾರಿಗೂ ಆರ‍್ಥಿಕ ಅಥವಾ ಸಾಮಾಜಿಕ ಪ್ರಯೋಜನವಿಲ್ಲ. ಬ್ರಾಹ್ಮಣಜಾತಿಯವನು, ಭೂಸುರನೇನಲ್ಲ; ಅವನ ಎಂಜಲು, ಅಂತ್ಯಜನೊಬ್ಬನ ಎಂಜಲಿಗಿಂತಾ ಯಾವರ‍್ಥದಲ್ಲೂ ಪವಿತ್ರವಲ್ಲ ಎಂಬುದನ್ನು ಇದರಲ್ಲಿ ಪಾಲ್ಗೊಳ್ಳುವ ಮುಗ್ಧರಿಗೆ ಹಂತ-ಹಂತವಾಗಿ ಮನವರಿಕೆ ಮಾಡಿಕೊಡಬೇಕು. ಇದು ಮಾನವಂತರೆಲ್ಲರ ಕರ‍್ತವ್ಯ. ಮಾನವಂತರು ಮಾಡಬೇಕಾದ ಕೆಲಸವನ್ನು ಪೊಲೀಸರಿಗೆ, ಮ್ಯಾಜಿಸ್ಟ್ರೇಟರಿಗೆ ವಹಿಸಿದರೆ ಹೇಗೆ? ನರಬಲಿ ಪದ್ಧತಿಯಂತೂ ಈಗ ಇಲ್ಲವೇ ಇಲ್ಲ. ಪ್ರಾಣಿಬಲಿ ನಿಷೇಧ ಇಬ್ಬಂದಿಯಾಗುತ್ತದೆ. ದೇಶಾದ್ಯಂತ/ರಾಜ್ಯಾದ್ಯಂತ ಮಾಂಸಾಹಾರವನ್ನು ನಿಷೇದಿಸುವುದಾದರೆ ಇದು ಸಿಂಧುವಾಗಬಹುದು; ಇಲ್ಲದಿದ್ದರೆ ಇಲ್ಲ. ತೆಂಗಿನಕಾಯಿ-ಬಾಳೆಹಣ್ಣು, ತಂಬಿಟ್ಟುಗಳಿಂದ ದೇವರು/ದೇವಿಯರು ತೃಪ್ತರಾಗಬಹುದಾದರೆ, ಬಹುಸಂಖ್ಯಾತರ ಬಾಡೂಟವನ್ನು ಅವರು ಬೇಡೆನ್ನಬೇಕೇಕೆ? ವೈಖಾನಸ, ಪಾಂಚರಾತ್ರ, ತಂತ್ರಸಾರ, ಶೈವಾಗಮಗಳನ್ನು ಸರಕಾರ ಒಪ್ಪಿಕೊಳ್ಳಬಹುದಾದರೆ, ಪ್ರಾಣಿಬಲಿ ಮಾತ್ರಾ ಹೇಗೆ ಮೂಢನಂಬಿಕೆಯಾಗುತ್ತದೆ? ಬೆತ್ತಲೆಸೇವೆ ಮೇಲ್ನೋಟಕ್ಕೂ ಕಂಡುಬರುವ ಸಾಮಾಜಿಕ ಶೋಷಣೆ. ತತ್ಸಮಾನವಾದ ಮುತ್ತುಕಟ್ಟುವ ಸೇವೆ, ದೇವದಾಸಿ ಪದ್ಧತಿ ಇತ್ಯಾದಿ, ಕೆಳಕುಲದ ಹೆಣ್ಣುಗಳ ಶೋಷಣೆಯ ಆಚರಣೆಗಳನ್ನು ಹಿಂದಿನ ಸರಕಾರಗಳೇ ಸಾಕಷ್ಟು ಮುತವರ‍್ಜಿಯಿಂದ ಹತ್ತಿಕ್ಕಿವೆ. ಅನಿಷ್ಟ ಪದ್ಧತಿಗಳು ಮರಳಿ ತಲೆಯೆತ್ತದಂತೆ, ಪರ‍್ಯಾಯಗೊಳ್ಳದಂತೆ ಸರಕಾರ ನೋಡಿಕೊಂಡರೆ ಸಾಕು. ಮರ‍್ಯಾದಸ್ಥ ಬದುಕಿಗೆ ಅಗತ್ಯವಾದ ಮರುವಸತಿ, ಉದ್ಯೋಗಾವಕಾಶ ಮತು ಸಮಾನತೆಗಳನ್ನು ಸರಕಾರ ಮುಂದುವರೆಸಬೇಕು. ಮದ್ಯ-ಮಾಂಸ-ಮೋಹಿನಿಯರನ್ನು ಪ್ರಾಮಾಣಿಕವಾಗಿ ಮುಟ್ಟದ, ನಿಜವಾಗಿ ಆತ್ಮನಿಷ್ಠೆಯಲ್ಲಿ ತೊಡಗಿಕೊಂಡಿರುವವರು ಪ್ರತ್ಯೇಕವಾಗಿ ಕುಳಿತು ಊಟಮಾಡಿದರೆ ಮಾಡಿಕೊಳ್ಳಲಿ ಬಿಡಿ. ಅದು ಅವರ ಮೂರ್ಖತನವೋ, ಆತ್ಮಸಾಧನೆಯೋ ಆಗಿದ್ದರೆ ಅದರಲ್ಲೇಕೆ ಹಸ್ತಕ್ಷೇಪ ಮಾಡಬೇಕು? ಆದರೆ ವಾಸ್ತು, ಜ್ಯೋತಿಷ್ಯ, ಮಾಟ-ಮಾಯೆ ಇತ್ಯಾದಿ ಹೆಸರಿನಲ್ಲಿ ಕಾಸು ಕಿತ್ತು ಹೊಟ್ಟೆಹೊರೆಯುವ ಸೋಂಬೇರಿತನ ಒಂದು ರೀತಿಯ ಭಿಕ್ಷಾವೃತ್ತಿಯೇ. ಅಂಥವರನ್ನು ಹಿಡಿದು ಪುನರ್ವಸತಿ ಕೇಂದ್ರಗಳಿಗಟ್ಟಿದರೆ ತಪ್ಪಿಲ್ಲ. ಅಂಥವರನ್ನು ಬೆಂಬಲಿಸುವ, ತಕ್ಷಣದ ಸುಖ-ಸಂತೋಷಗಳನ್ನು ನಂಬಿ, ನಿರೀಕ್ಷಿಸುವ ಮಂದಿಗೆ ಶಿಕ್ಷೆಯಲ್ಲ, ಶಿಕ್ಷಣ ಕೊಡಬೇಕು. ಕಂದಾಚಾರವೆಂದರೆ ಹಿಂದಿನಿಂದ ಬಂದ ಮೂರ್ಖ ಆಚರಣೆಗಳು ಮಾತ್ರಾ ಎಂದೇನೂ ಇಲ್ಲ. ಮಾದರೀ ಚುನಾವಣಾ ನೀತಿ ಸಂಹಿತಿಯಲ್ಲೇ ಇಂಥವು ಬಹಳಷ್ಟು ಕಾಣಬರುತ್ತವೆ. ಚುನಾವಣಾ ಪ್ರದೇಶದಲ್ಲಿ, ವಿಕೋಪದ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೂ, ಆಡಳಿತ, ಆಯೋಗದ ಅನುಮತಿ ಪಡೆಯಬೇಕೆನ್ನುವುದು, ಅಭಾವಕ್ಕೊಳಗಾದ ಅಗತ್ಯವಸ್ತುಗಳ ಪೂರೈಕೆ ಹೊಣೆಯನ್ನೂ ನೇರವಾಗಿ ರೆವೆನ್ಯು ಅಧಿಕಾರಿಗಳು ವಹಿಸಬೇಕೆನ್ನುವುದು ಇತ್ಯಾದಿ ತೋರಿಕೆ-ಹೇಳಿಕೆಗಳೂ ಮೂಢನಂಬಿಕೆಯ ಪಟ್ಟಿಗೆ ಬರದೆ ದಕ್ಷತೆಯೆಂಬ ಹೆಸರಿಗೆ ಅರ್ಹವಾಗುವಂಥದೇ?
Posted on: Thu, 07 Nov 2013 06:46:12 +0000

Trending Topics



Recently Viewed Topics




© 2015