ವಿಷಯ: ಕನ್ನಡ ಓಸಿಆರ್‌, - TopicsExpress



          

ವಿಷಯ: ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ ----------------------------------------------------------- ( ಈ ಪತ್ರವನ್ನು ಇಲಾಖೆಗೆ ಸಲ್ಲಿಸಲಾಗಿದ್ದು ಇದಕ್ಕೆ ವ್ಯಾಪಕ ಪ್ರಚಾರ ನೀಡಲು ಕೋರಲಾಗಿದೆ) ಇವರಿಂದ ಡಾ|| ಸಿ ಎಸ್‌ ಯೋಗಾನಂದ, ಓಸಿಆರ್‌ ತಜ್ಞರು, ಮೈಸೂರು ಎನ್‌ ಎ ಎಂ ಇಸ್ಮಾಯಿಲ್‌, ಹಿರಿಯ ಪತ್ರಕರ್ತರು, ಬೆಂಗಳೂರು ಆನಂದ್‌, ಖಾಸಗಿ ಕನ್ನಡ ತಂತ್ರಾಂಶ ತಯಾರಕರು, ಬೆಂಗಳೂರು ಓಂ ಶಿವಪ್ರಕಾಶ್‌, ಲಿನಕ್ಸ್‌ ತಜ್ಞ; ಆನ್‌ಲೈನ್‌ ವಚನ-ದಾಸ ಸಾಹಿತ್ಯ, ವಿಕಿಪೀಡಿಯಾದ ಸಮುದಾಯ ಕಾರ್ಯಕರ್ತ, ಬೆಂಗಳೂರು ಟಿ ಜಿ ಶ್ರೀನಿಧಿ, ಸಾಫ್ಟ್‌ವೇರ್‌ ರಂಗದಲ್ಲಿರುವ ಐಟಿ ಪತ್ರಕರ್ತ, ಬೆಂಗಳೂರು ಡಾ|| ಎ ಸತ್ಯನಾರಾಯಣ, ಕನ್ನಡ ಕಂಪ್ಯೂಟಿಂಗ್‌ ಕುರಿತ ಮೊದಲ ಡಾಕ್ಟರೇಟ್‌ ಪ್ರಬಂಧಕಾರ, ಬೆಂಗಳೂರು ಬೇಳೂರು ಸುದರ್ಶನ, ಮಾಧ್ಯಮ ಸಲಹೆಗಾರರು, ಐಟಿ ಪಠ್ಯಪುಸ್ತಕ ಲೇಖಕರು, ಬೆಂಗಳೂರು ಟಿ ಎಸ್‌ ಶ್ರೀಧರ, ಅಂಧ ಐಟಿ ತಂತ್ರಜ್ಞ, ಟೆಕ್ಸ್ಟ್ ಟು ಸ್ಪೀಚ್‌ ಕನ್ನಡಕ್ಕೆ ತಂದ ತಂತ್ರಜ್ಞ , ಬೆಂಗಳೂರು ಇವರಿಗೆ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕನ್ನಡ ಭವನ ಜಯಚಾಮರಾಜೇಂದ್ರ ರಸ್ತೆ (ಜೆ ಸಿ ರಸ್ತೆ) ಬೆಂಗಳೂರು ೫೬೦೦೦೨ ವಿಷಯ: ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಿ ಕನ್ನಡ ತಂತ್ರಜ್ಞರ ಸಭೆ ಕರೆಯಲು ಆಗ್ರಹ ಉಲ್ಲೇಖ:ಕಸನಿ/31/ಕ.ಅ/2011-12 ಭಾಗ-2 ದಿನಾಂಕ: 02-11-2014 ಮಾನ್ಯರೇ ಕನ್ನಡ ಓಸಿಆರ್‌, ಕನ್ನಡ ಪ್ಲಗಿನ್‌ ಮತ್ತು ಉಬುಂಟು ಕನ್ನಡ ಅನುವಾದ ಕುರಿತ ಒಟ್ಟು ೮೦.೦೦ ಲಕ್ಷ (ಎಂಬತ್ತು) ಲಕ್ಷ ರೂ.ಗಳ ಟೆಂಡರನ್ನು ಕೂಡಲೇ ರದ್ದುಪಡಿಸಬೇಕೆಂದು ನಾವು ಈ ಮೂಲಕ ತಮ್ಮನ್ನು ಆಗ್ರಹಪಡಿಸುತ್ತಿದ್ದೇವೆ.ಈ ಟೆಂಡರ್‌ ತರ್ಕರಹಿತ, ಅವೈಜ್ಞಾನಿಕ ಮತ್ತು ಅಪ್ರಯೋಜಕ ಎಂಬುದು ನಮ್ಮೆಲ್ಲರ ಖಚಿತ ಅಭಿಪ್ರಾಯವಾಗಿದೆ. ಏಕೆಂದರೆ ಕನ್ನಡ ಓಸಿಆರ್‌: ಸಮಾಲೋಚನೆ, ಮುಂದಾಲೋಚನೆ ಇಲ್ಲದ ಟೆಂಡರ್‌ 1) ಕನ್ನಡ ಓಸಿಆರ್‌ ಕುರಿತು ಈಗಾಗಲೇ ಹಲವು ಒಳ್ಳೆಯ ಯತ್ನಗಳಾಗಿವೆ. ಈ ಕುರಿತು ದಿನಾಂಕ ೧೬.೧೨.೨೦೧೪ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಡೆಸಿದ ಕನ್ನಡ ತಂತ್ರಾಂಶ ಕುರಿತ ಸಭೆಯಲ್ಲಿ ಮಾಹಿತಿಗಳನ್ನು ನೀಡಲಾಗಿದೆ. ಸದರಿ ಟೆಂಡರಿಗೆ ಶಿಫಾರಸು ಮಾಡಿರುವ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ|| ಚಿದಾನಂದಗೌಡರು ಈ ಸಭೆಯಲ್ಲಿ ಹಾಜರಿದ್ದು ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಟ್ಟಿರುತ್ತೇವೆ. 2) ಕನ್ನಡ ಓಸಿಆರ್‌ ಕುರಿತಂತೆ ಮುಖ್ಯವಾಗಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಒಂದು ಗಂಭೀರ ಪ್ರಯತ್ನವನ್ನು ಮಾಡಿ ಯಶಸ್ವಿಯಾಗಿದ್ದು ಅದರ ಒಂದು ಮಾದರಿಯನ್ನೂ ಈ ಪತ್ರದೊಂದಿಗೆ ಲಗತ್ತಿಸಲಾಗಿದೆ. ಈ ತಂತ್ರಾಂಶದ ಯಶಸ್ವೀ ಪ್ರಾತ್ಯಕ್ಷಿಕೆಯನ್ನು ವಿಧಾನಸಭಾ ಅಧ್ಯಕ್ಷರಾದ ಮಾನ್ಯ ಶ್ರೀ ಕಾಗೋಡು ತಿಮ್ಮಪ್ಪನವರ ಮುಂದೆ ಐಐಎಸ್‌ಸಿ ತಂಡವು ೨೦೧೪ರ ಸೆಪ್ಟೆಂಬರ್‌ ತಿಂಗಳಿನಲ್ಲಿ ನೀಡಿದೆ. 3) ಕನ್ನಡಕ್ಕೆ ೧ ‘ಓಸೀ‌ಆರ್’ https://youtube/watch?v=zRRr856jA-4 ಈ ಮೇಲಿನ ಕೊಂಡಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಮಾಡುತ್ತಿರುವ ಓಸೀಆರ್ ಕುರಿತ ಮಾಹಿತಿ ಇದೆ (video). 4) ಮೈಸೂರಿನ ಗಣಿತಜ್ಞ ಮತ್ತು ತಂತ್ರಜ್ಞ ಡಾ|| ಸಿ ಎಸ್‌ ಯೋಗಾನಂದರವರು ಸಾಫ್ಟ್‌ ಓಸಿಆರ್‌ನ್ನು ರೂಪಿಸಿದ್ದು ೨೦೧೧ರಲ್ಲೇ ಧಾರವಾಡದಲ್ಲಿ ಕನ್ನಡ ವಿಶ್ವವಿದ್ಯಾಲಯದ ಆಗಿನ ಕುಲಪತಿ ಡಾ|| ಮುರುಗೆಪ್ಪನವರು ಬಿಡುಗಡೆ ಮಾಡಿದ್ದರು. ಈ ಓಸಿಆರ್‌ ಕೇವಲ ಸ್ಕಾನ್‌ ಆದ ಪಠ್ಯವನ್ನು ( ಟೆಂಡರಿನಲ್ಲಿ ಉಲ್ಲೇಖಿಸಿದ ಬೃಂದಾವನ್‌, ರೋಮನ್‌ ಅಲ್ಲದೆ ಇನ್ನೂ ಹಲವು ಫಾಂಟುಗಳ ಪಠ್ಯಗಳು) ಯುನಿಕೋಡ್‌‌ನಲ್ಲಿ ಹುಡುಕಲು ಸಹಕರಿಸುವುದಲ್ಲದೆ, ಪಠ್ಯದಿಂದ ಧ್ವನಿಗೆ ಪರಿವರ್ತಿಸುವ ಈ-ಸ್ಪೀಕ್‌ ತಂತ್ರಜ್ಞಾನದ ಮೂಲಕ ಪುಸ್ತಕಗಳನ್ನು ನೇರವಾಗಿ ಕನ್ನಡದಲ್ಲಿಯೇ ಕೇಳಬಹುದಾಗಿದೆ. ಇದನ್ನು ಸಂಪೂರ್ಣ ಓಸಿಆರ್‌ ಮಾಡುವುದಕ್ಕೆ ಖಂಡಿತ ಸಾಧ್ಯವಿದೆ. ಡಾ. ಯೋಗಾನಂದರ ಓಸಿಆರ್ ತಂತ್ರಾಂಶ ಎಷ್ಟು ಸೊಗಸಾಗಿ ಕೆಲಸಮಾಡುತ್ತದೆ ಎನ್ನುವುದರ ಉದಾಹರಣೆಯನ್ನು ನಾವು ಸಿರಿನುಡಿಯಲ್ಲಿ (sirinudi.org) ನೋಡಬಹುದಾಗಿದೆ. 5) ಐ೨ಓಸಿಆರ್ (i2ocr/free-online-kannada-ocr) ಎಂಬ ತಾಣದಲ್ಲಂತೂ ಕನ್ನಡದ ಪ್ರಾಯೋಗಿಕ ಓಸಿಆರ್ ಅನ್ನು ಯಾವುದೇ ಸಾಫ್ಟ್‌ವೇರ್ ಅನುಸ್ಥಾಪಿಸಿಕೊಳ್ಳದೆಯೇ ಬಳಸಬಹುದು. sciweavers ಎಂಬ ತಂಡ ನಡೆಸುತ್ತಿರುವ ತಾಣ ಇದು. ಇನ್ನು Kaleido Software & Servicesನ KanScan ಕೂಡ ಉಚಿತ ಡೌನ್‌ಲೋಡ್‌ಗಾಗಿ ಲಭ್ಯವಿದೆ. 6) ಈ ಯಾವುದೇ ತಂತ್ರಾಂಶದಲ್ಲಿರಬಹುದಾದ ಕೊರತೆಗಳನ್ನು ಹೋಗಲಾಡಿಸಲು ನೆರವಾಗುವುದು ಸರ್ಕಾರದ ಪ್ರಯತ್ನವಾಗಬೇಕೇಹೊರತು ಹೊಸ ಓಸಿಆರ್‌ಗಾಗಿ ಐವತ್ತು ಲಕ್ಷ ರೂಪಾಯಿಗಳಷ್ಟು ಸಾರ್ವಜನಿಕ ಹಣವನ್ನು ಪೋಲುಮಾಡುವುದು ಖಂಡಿತಾ ಅನಾವಶ್ಯಕ.ಆದ್ದರಿಂದ ಕನ್ನಡ ಓ ಸಿ ಆರ್‌ ಮಾಡುವುದಕ್ಕೆ ನೀಡಿರುವ ಟೆಂಡರ್‌ ಅವೈಜ್ಞಾನಿಕವಾಗಿರುತ್ತದೆ. ಕೂಡಲೇ ಇದನ್ನು ರದ್ದುಗೊಳಿಸಿರಿ. ಓಸಿಆರ್‌ ರಂಗದಲ್ಲಿ ಕೆಲಸ ಮಾಡುತ್ತಿರುವ ತಜ್ಞರ ಸಭೆಯನ್ನು ಕರೆದು ಈ ಬಗ್ಗೆ ಚರ್ಚಿಸಿರಿ. ಕನ್ನಡ ಪ್ಲಗಿನ್‌ಗಳ ಟೆಂಡರ್‌ ಕೂಡಾ ಅನಗತ್ಯ, ಅವೈಜ್ಞಾನಿಕ 1) ಕನ್ನಡ ಪ್ಲಗಿನ್‌ ಮಾಡಲು ೧೫.೦೦ ಲಕ್ಷ ರೂ.ಗಳ ಟೆಂಡರ್‌ ಕರೆದಿರುತ್ತೀರಿ. ಆದರೆ ಇದಕ್ಕೆ ಯಾವ ವೈಜ್ಞಾನಿಕ ನಿರ್ದಿಷ್ಟತೆಗಳೂ ಇಲ್ಲ. ಖಾಸಗಿ ಸಂಸ್ಥೆಗಳು ರೂಪಿಸುವ ತಂತ್ರಾಂಶಗಳು ಕಾಲಕಾಲಕ್ಕೆ ಬದಲಾದಾಗ ಇದೇ ಪ್ಲಗಿನ್‌ಗಳು ವ್ಯರ್ಥವಾಗುತ್ತವೆ. ಅಲ್ಲದೆ ಈ ಹಿಂದೆ ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ ನಾಲ್ಕು ತಂತ್ರಾಂಶಗಳು ಕಾಲಬಾಹಿರವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಯಸುತ್ತೇವೆ. ಖಾಸಗಿ ತಂತ್ರಾಂಶ ತಯಾರಕರ ಸಭೆ ಕರೆದು ಅವರು ಕನ್ನಡಕ್ಕಾಗಿ ಈ ಬಗೆಯ ಪ್ಲಗಿನ್‌ಗಳನ್ನು ರೂಪಿಸಲು ತಿಳಿಸಬೇಕೆಂದು ೨೦೧೪ರ ಡಿ. ೧೬ರ ಸಭೆಯಲ್ಲಿ ಚರ್ಚೆಯಾಗಿದೆ. ಪೈರೇಟೆಡ್‌ ತಂತ್ರಾಂಶಗಳನ್ನೇ ಬಳಸುವವರು ಸರ್ಕಾರವು ರೂಪಿಸುವ ಪ್ಲಗಿನ್‌ ತಂತ್ರಾಂಶವನ್ನು ಹೇಗೆ ಅಳವಡಿಸಿಕೊಳ್ಳುತ್ತಾರೆ ಎಂಬುದೂ ದೊಡ್ಡ ಪ್ರಶ್ನೆ. ವಿವಿಧ ಖಾಸಗಿ ಸಂಸ್ಥೆಗಳು ತಮ್ಮ ಮತ್ತು ಮಾರುಕಟ್ಟೆ ಅಗತ್ಯಕ್ಕೆ ತಕ್ಕಂತೆ ರೂಪಿಸುವ ತಂತ್ರಾಂಶಗಳಿಗೆ ಸರ್ಕಾರವು ಸಾರ್ವಜನಿಕ ನಿಧಿಯನ್ನು ಬಳಸಿ ಕಾಲಬಾಹಿರವಾಗುವ ಮತ್ತು ಸದಾ ಬದಲಾವಣೆ ಬಯಸುವ ಪ್ಲಗಿನ್‌ಗಳನ್ನು ರೂಪಿಸುವುದು ಅಸಮಂಜಸವಾಗಿದೆ. 2) ಪದ ಎಣಿಕೆಯನ್ನು ಎಲ್ಲಾ ತಂತ್ರಾಂಶಗಳೂ ಸರಿಯಾಗಿಯೇ ಮಾಡುತ್ತಿವೆ. ಇದಕ್ಕಾಗಿ ಪ್ಲಗ್ ಇನ್ ಅಗತ್ಯವಿಲ್ಲ. ಇನ್ನು ಪದ ಪರೀಕ್ಷೆ, ನಿಘಂಟು ಇತ್ಯಾದಿಗಳನ್ನು ತಯಾರಿಸುವ ಕೆಲಸ. ಈ ಕೆಲಸವನ್ನು ಸರ್ಕಾರ ಮಾಡಬೇಕು. ಆದರೆ ಅದನ್ನು ಮಾಡುವುದು ಹೀಗೆ ಟೆಂಡರ್ ಕರೆಯುವ ಮೂಲಕವಂತೂ ಖಂಡಿತವಾಗಿಯೂ ಅಲ್ಲ. ಟೆಂಡರ್ ಪ್ರಕಟಣೆಯಲ್ಲಿ ಉಲ್ಲೇಖಿಸಲಾದ ಎಲ್ಲಾ ತಂತ್ರಾಂಶಗಳೂ ತಮ್ಮದೇ ಆದ ಸ್ಪೆಲ್ ಚೆಕ್ ಮತ್ತು ನಿಘಂಟು ಎಂಜಿನ್ ಗಳನ್ನು ಹೊಂದಿವೆ. ಇಲ್ಲಿ ಕನ್ನಡವನ್ನೂ ಸೇರಿಸಿಕೊಳ್ಳುವಂತೆ ನಾವು ಈ ಕಂಪೆನಿಗಳ ಮೇಲೆ ಒತ್ತಡ ಹೇರಬೇಕು. ಕನ್ನಡವನ್ನು ಸೇರಿಸಿಕೊಳ್ಳುವುದಕ್ಕೆ ಅಡೋಬಿ ಸಿದ್ಧವಿದೆ. ಅದಕ್ಕಿರುವ ದೊಡ್ಡ ಸಮಸ್ಯೆಯೆಂದರೆ ಮುಕ್ತವಾಗಿರುವ, ಸರಿಯಾಗಿ ಟ್ಯಾಗ್ ಮಾಡಿರುವ ಒಂದು ಪದಸಂಚಯ ಬೇಕು. ಇಂಧ ಒಂದು ಪದ ಸಂಚಯ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಐಐಎಲ್ ನ ಬಳಿ ಇದೆ. ಮತ್ತೊಂದನ್ನು ರಾಜ್ಯ ಸರ್ಕಾರದ ಅಧೀನದಲ್ಲಿರುವ ಕನ್ನಡ ವಿಶ್ವವಿದ್ಯಾಲಯ ರೂಪಿಸುತ್ತಿದೆ. ಈ ಎರಡೂ ಯೋಜನೆಗಳ ಸ್ಥಿತಿ ಏನಾಗಿದೆ ಎಂಬುದನ್ನು ಕಂಡುಕೊಂಡು ಅದನ್ನು ಪೂರ್ಣಗೊಳಿಸಲು ಅಗತ್ಯವಿರುವ ಆಡಳಿತಾತ್ಮಕ ನೆರವು ನೀಡಬೇಕು. ಹಾಗೆಯೇ ಕೆಲಸ ಸರಿಯಾಗಿ ಮತ್ತು ಶೀಘ್ರವಾಗಿ ಆಗುವಂತೆ ಚುರುಕು ಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡಿದರೆ ಸಾಕು. ಈ ಸಂಸ್ಥೆಗಳು ಈಗಾಗಲೇ ಪದಗಳನ್ನು ಹೇಗೆ ಸಂಗ್ರಹಿಸಿಟ್ಟಿವೆ. ಅವುಗಳನ್ನು ಹೇಗೆ ಟ್ಯಾಗ್ ಮಾಡಲಾಗಿದೆ ಎಂಬುದನ್ನು ಪರಿಶೀಲಿಸಿ ಅದನ್ನು ಸಾರ್ವಜನಿಕರ ಸಹಾಯ ಅಥವಾ ಕ್ರೌಡ್ ಸೋರ್ಸಿಂಗ್ ಮೂಲಕ ಟ್ಯಾಗ್ ಮಾಡುತ್ತಾ ಮುಂದುವರಿಯಲು ಸಾಧ್ಯವೇ ಎಂಬ ಅಂಶವನ್ನೂ ಪರಿಶೀಲಿಸಬಹುದು. ಕನ್ನಡ ವಿಶ್ವವಿದ್ಯಾಲಯ ಹಾಗೂ ಸಿಐಐಎಲ್ ಎರಡರಲ್ಲೂ ಮೇಲ್ವಿಚಾರಣೆಗೆ ಒಂದು ಸಾಂಸ್ಥಿಕ ವ್ಯವಸ್ಥೆ ಇರುವುದರಿಂದ ಇಂಥದ್ದೊಂದು ಯೋಜನೆಯನ್ನು ನಡೆಸುವುದು ಕಷ್ಟವೇನೂ ಆಗಲಾರದು. 3) ‘Artificial intelligence’ನ ಇಂದಿನ ಕಾಲದಲ್ಲಿ Font and-size independent ಓಸೀಆರ್ ಮಾಡುವ ಎಲ್ಲಾಸಾಧ್ಯತೆಗಳು ಇದ್ದಾಗ, ಇಂತಹ ಹಳೆಯ ಕಾಲದ ಮಾದರಿಯ ಒಸೀಆರ್‌ಗೆ ಟೆಂಡರ್‌ ಕರೆದಿರುವುದು ಹಾಸ್ಯಾಸ್ಪದವಾಗಿದೆ. 4) ಯಾವುದೇ ಸರ್ಕಾರ ಈ ಬಗೆಯ ಉತ್ಪನ್ನಗಳ ತಯಾರಿಗೆ ಹೊರಡಬಾರದು ಎಂಬುದು ನಮ್ಮೆಲ್ಲರ ನಿಲುವು. ಈ ಬಗೆಯ ಉತ್ಪನ್ನಗಳನ್ನು ಯಾರು ಬೇಕಾದರೂ ತಯಾರಿಸಲು ಸಾಧ್ಯವಿರುವಂಥ ಮೂಲ ಸೌಕರ್ಯವನ್ನು ನಿರ್ಮಿಸುವಷ್ಟಕ್ಕೆ ಸರ್ಕಾರದ ಕೆಲಸ ಸೀಮಿತಗೊಳ್ಳಬೇಕು. ಒಂದು ಟ್ಯಾಗ್ ಮಾಡಿದ ಪದಸಂಚಯವಿದ್ದರೆ ಅದನ್ನು ಯಾವ ಕಂಪೆನಿ ಬೇಕಾದರೂ ಬಳಸಿಕೊಳ್ಳುವಂಥ ವ್ಯವಸ್ಥೆಯೊಂದನ್ನು ಮಾಡಿಡಬೇಕಷ್ಟೇ. ಆಗ ಆ ಕಂಪೆನಿಗಳಿಗೆ ಇಂಥದ್ದನ್ನು ನೀವು ಬಳಸಿಕೊಳ್ಳಬಹುದು ಎಂದೂ ಹೇಳಬಹುದು. ಹಾಗೆಯೇ ಸರ್ಕಾರಿ ಖರೀದಿಗಳಿಗೆ ಈ ನಿಘಂಟು ಇರುವುದು ಅಗತ್ಯ ಎಂಬ ಷರತ್ತನ್ನೂ ಇಡಬಹುದು. ಸಹಜವಾಗಿಯೇ ಎಲ್ಲಾ ಕಂಪೆನಿಗಳೂ ಇದನ್ನು ಮಾಡುತ್ತವೆ. ಉಬುಂಟು ಕಾರ್ಯಾಚರಣಾ ತಂತ್ರಾಂಶಕ್ಕೆ ಕನ್ನಡ ಅಳವಡಿಕೆ ಗೊಂದಲದ ಟೆಂಡರ್‌ 1) ಈ ೧೫.೦೦ ಲಕ್ಷ ರೂ.ಗಳ ಕನ್ನಡ ಅವತರಣಿಕೆಯ ಟೆಂಡರ್‌ ಕೂಡಾ ಬಾಲಿಶವಾಗಿದೆ. ಏಕೆಂದರೆ ಉಬುಂಟುವಿನ ಕನ್ನಡೀಕರಣ ಈಗಾಗಲೇ ಮುಕ್ತ ತಂತ್ರಾಂಶ ಸಮುದಾಯದಿಂದ ನಡೆಯುತ್ತಿದೆ. https://apps.ubuntu/cat/applications/quantal/language-pack-gnome-kn/ ಹಾಗು indiatechonline/it-for-you.php?id=247 ಈ ಮೇಲಿನ ಕೊಂಡಿಗಳನ್ನು ಪರಿಶೀಲಿಸಿದರೆ, ಈಗಾಗಲೆ ಈ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲಸದ ಅರಿವಾಗುತ್ತದೆ. ನಿಧಾನಗತಿಯಲ್ಲಿ ನಡೆಯುತ್ತಿರುವ ಕೆಲಸಗಳನ್ನು ಗುರುತಿಸಿ, ನಿಧಾನಕ್ಕೆ ಕಾರಣ ಹುಡುಕಿ ಸರಿಪಡಿಸಿದರೆ, (ಸಮರ್ಪಕ ಶಬ್ದಗಳ ಕೊರತೆಯೂ ಇರಬಹುದು) ’ಕ್ರೌಡ್‌ಸೋರ್ಸಿಂಗ್’ ನ ಅಗಾಧ ಶಕ್ತಿಯ ಅರಿವಾಗುತ್ತದೆ. 2) ಉಬುಂಟು ಸಿಸ್ಟಂಗೆ ಕನ್ನಡ ಅಳವಡಿದೆ ಎಂದರೆ ಏನರ್ಥ? ಉಬುಂಟುನಲ್ಲಿ ಕನ್ನಡ ಬಳಸುವುದಕ್ಕೆ ತೊಂದರೆಗಳೇನೂ ಇಲ್ಲ. ಇಲ್ಲಿ ಕನ್ನಡ ಅಳವಡಿಸುವುದು ಎಂದರೇನು?ಒಂದು ವೇಳೆ ಲೋಕಲೈಝೇಷನ್ ಎಂಬುದು ಈ ಸಾಲಿನ ಅರ್ಥವಾಗಿದ್ದರೆ ಅದನ್ನು ಖಂಡಿತವಾಗಿಯೂ ಸರ್ಕಾರ ಟೆಂಡರ್ ಕರೆದು ಮಾಡಬಾರದು. ಅದನ್ನು ಸಮುದಾಯವೇ ಮಾಡಬೇಕು. ಇಲ್ಲವಾದರೆ ಉಂಬುಟು ಪರಿಕಲ್ಪನೆಗೇ ಅರ್ಥವಿರುವುದಿಲ್ಲ. ಈ ಟೆಂಡರ್‌ನ ಕೆಲ ನಿಬಂಧನೆಗಳು ಬಹುಶಃ ಅನೇಕ ಕಂಪೆನಿಗಳು / ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸದಂತೆ ಮಾಡುವ ಉದ್ದೇಶದಿಂದಲೇ ರೂಪಿಸಿದಂತೆ ಕಾಣುತ್ತಿದೆ. ೫ ವರ್ಷಗಳ ಕನ್ನಡ ತಂತ್ರಾಂಶ ಅಭಿವೃದ್ಧಿ ಅನುಭವವನ್ನು ’ಮುಖ್ಯ ಗ್ರಾಹಕ’ರ ಪ್ರಮಾಣಪತ್ರದಿಂದ ದೃಢಪಡಿಸಿಕೊಳ್ಳುವ ಬಗ್ಗೆ ನಿಬಂಧನೆ ಹೇಳುತ್ತದೆ. ’ಮುಖ್ಯ’ ಗ್ರಾಹಕರು ಯಾರು? ಇದೇ ಗೊಂದಲಮಯವಾಗಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಿತಿಯ ಅಭಿಪ್ರಾಯವೇ ಅಂತಿಮ ಎಂದು ಸದರಿ ಟೆಂಡರಿನಲ್ಲಿ ನಮೂದಿಸಿರುತ್ತೀರಿ. ಅಂದರೆ ಈ ಟೆಂಡರ್‌ ರೂಪಿಸುವಲ್ಲಿ ಸಮಿತಿಯೂ ಭಾಗಿಯಾಗಿದೆ ಎಂದು ನಾವು ಭಾವಿಸುತ್ತೇವೆ. ಸಾರ್ವಜನಿಕ ನಿಧಿಯನ್ನು ಖಾಸಗಿ ಸಂಸ್ಥೆಗಳ ಮೂಲಕ ಖಾಸಗಿ ತಂತ್ರಾಂಶಗಳಿಗಾಗಿ ಪ್ಲಗಿನ್‌ ರೂಪಿಸುವುದಕ್ಕೆ, ಈಗಾಗಲೇ ನಡೆದ ಕನ್ನಡದ ತಂತ್ರಾಂಶದ ಕೆಲಸಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ಇರುವುದಕ್ಕೆ ನಮ್ಮೆಲ್ಲರ ಸಂಪೂರ್ಣ ವಿರೋಧವಿದೆ. ಈ ಹಿಂದಿನ (ಫಾಂಟ್‌ ಪರಿವರ್ತಕ, ಮೊಬೈಲ್‌ ತಂತ್ರಾಂಶ, ಬ್ರೈಲ್‌ ತಂತ್ರಾಂಶ ಮತ್ತು ಯುನಿಕೋಡ್‌ ಫಾಂಟ್‌) ಟೆಂಡರ್‌ ಪ್ರಕ್ರಿಯೆಯು ವಿಳಂಬವಾಗಿದೆ, ಆದ್ದರಿಂದಲೇ ನಮಗೆ ಸಮಕಾಲೀನ ತಂತ್ರಜ್ಞಾನ ಅಳವಡಿಸಲಾಗಿಲ್ಲ ಮತ್ತು ಹೊಸ ಬೆಳವಣಿಗೆಗಳನ್ನು ಗಮನಿಸಲಾಗಿಲ್ಲ ಎಂದು ಸಮಿತಿಯವರು ಹೇಳಿದ್ದರಲ್ಲದೆ ಈ ವಿಳಂಬಕ್ಕೆ ಸರ್ಕಾರವನ್ನೇ ದೂರಿದ್ದರು. ಈಗ ಇದೇ ಸಮಿತಿಯು ಇಂಥ ಅವೈಜ್ಞಾನಿಕ ಮತ್ತು ಸಮುದಾಯದ ಭಾಗಿತ್ವವನ್ನೇ (ಕ್ರೌಡ್‌ ಸೋರ್ಸಿಂಗ್‌ ಮತ್ತು ಓಪನ್‌ ಕಲ್ಚರ್‌) ಧಿಕ್ಕರಿಸಿ ಟೆಂಡರ್‌ ರೂಪಿಸಿರುವುದು ಅತ್ಯಂತ ಖಂಡನೀಯ. ಆದ್ದರಿಂದ ತಾವು ಕೂಡಲೇ ಈ ಟೆಂಡರನ್ನು ರದ್ದುಪಡಿಸಬೇಕು ಎಂದು ನಾವೆಲ್ಲರೂ ಒತ್ತಾಯಿಸುತ್ತೇವೆ. ಈ ಬಗ್ಗೆ ಡಿಸೆಂಬರ್‌ ೧೬ರಂದು ವಿಕಾಸಸೌಧದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕರೆದ ಸಭೆಯಲ್ಲಿ ಸಹಮತದಿಂದ ಚರ್ಚೆಯಾದಂತೆ ಒಂದು ದುಂಡುಮೇಜಿನ ಸಭೆ ಕರೆಯಬೇಕು ಮತ್ತು ಕನ್ನಡ ತಂತ್ರಾಂಶಗಳನ್ನು ಸಮುದಾಯದ ಜೊತೆಗೂಡಿ ರೂಪಿಸುವ, ಸುಧಾರಿಸುವ ಬಗ್ಗೆ ಚರ್ಚೆಯಾಗಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ನಿಮ್ಮಿಂದ ತಕ್ಷಣದ ವಿಧಾಯಕ ಸ್ಪಂದನೆ ದೊರೆಯುವ ನಿರೀಕ್ಷೆಯಲ್ಲಿ ನಿಮ್ಮ ವಿಶ್ವಾಸಿಗಳು (ಈ ಪತ್ರವನ್ನು ಸಮಯಾಭಾವದಿಂದಾಗಿ ಈಮೈಲ್‌ ಮುಖಾಂತರ ಹಂಚಿಕೊಂಡಿರುವುದರಿಂದ ಎಲ್ಲರೂ ಈಮೈಲ್‌ ಮುಖೇನ ಸಮ್ಮತಿ ಸೂಚಿಸಿರುತ್ತಾರೆ. ಇಲ್ಲಿ ಅವರ ಖುದ್ದು ಸಹಿ ನಮೂದಿಸಿರುವುದಿಲ್ಲ) ಪತ್ರದ ಪ್ರತಿಯನ್ನು ಮಾಹಿತಿಗಾಗಿ ಈ ಕೆಳಗಿನವರಿಗೆ ಸಲ್ಲಿಸಲಾಗಿದೆ: ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Posted on: Fri, 26 Dec 2014 16:56:18 +0000

Trending Topics



Recently Viewed Topics




© 2015